ಜಿಲ್ಲಾಸುದ್ದಿ

ಕೆಪಿಎಸ್‌ಸಿ ಅಕ್ರಮ: ಸಿಐಡಿ ವಿಚಾರಣೆ ವೇಳೆ ಕಣ್ಣೀರು ಹಾಕಿದ ಕಣ್ಣಾಳೆ

ಬೀದರ್, ಸೆ.19: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸಿಐಡಿ ಅಧಿಕಾರಿಗಳು ಮಹತ್ವದ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದಾರೆ. ವಿಚಾರಣೆ ವೇಳೆ ಪ್ರಕರಣದ ಸೂತ್ರಧಾರಿ ಮಧ್ಯವರ್ತಿ ಬಸವರಾಜ್ ಕಣ್ಣಾಳೆ ಕಣ್ಣೀರು ಹಾಕಿರುವುದಾಗಿ ತಿಳಿದುಬಂದಿದೆ.

ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತೊಮ್ಮೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂಬ ವಿಚಾರವೂ ಚರ್ಚೆಗೆ ಬಂದಿದೆ. ‘ನಾನೇನು ಮಾಡಲಿ, ಶಾಸಕರಾಗಬೇಕೆಂಬ ಕನಸು ಹಾಳಾಯಿತು’ ಎಂದು ಕಣ್ಣಾಳೆ ಸಿಐಡಿ ವಿಚಾರಣೆ ವೇಳೆ ಕಣ್ಣೀರು ಹಾಕಿದ್ದಾಗಿ ಮೂಲಗಳು ತಿಳಿಸಿವೆ.

ನೇಮಕಾತಿ ಅಕ್ರಮದ ಬಗ್ಗೆ ತನಿಖೆ ಚುರುಕು

ಕೆಪಿಎಸ್‌ಸಿ ಪ್ರಕರಣದ ತನಿಖೆ ವೇಳೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಸಾಕ್ಷ್ಯಗಳು ದೊರೆತಿವೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಕೃತ್ಯಗಳ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಹಿಂದಿನ ಸಿಐಡಿ ವಿಚಾರಣೆ ವೇಳೆಯೂ ಕಣ್ಣಾಳೆ ಕಣ್ಣೀರು ಹಾಕಿದ್ದಾಗಿ ಹೇಳಲಾಗಿದ್ದು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಅವರನ್ನು ನಂಬಿ ಭವಿಷ್ಯ ಹಾಳು ಮಾಡಿಕೊಂಡೆ ಎಂದು ಆತ ಹೇಳಿರುವುದಾಗಿ ತಿಳಿದುಬಂದಿದೆ.

ಅಕ್ರಮ ನೇಮಕಾತಿಗಾಗಿ ಕಣ್ಣಾಳೆ ಮತ್ತೊಂದು ‘ಬಿ ಟೀಂ’ ಸಿದ್ಧಪಡಿಸಿದ್ದ ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ತಂಡದ ಮೂಲಕ ಕೆಪಿಎಸ್‌ಸಿ ಅಭ್ಯರ್ಥಿಗಳಿಗೆ ಗಾಳ ಹಾಕಲಾಗುತ್ತಿತ್ತೆಂಬ ಅನುಮಾನ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿಯಷ್ಟೇ ಅಲ್ಲದೆ, ಕೆಎಎಸ್ ಹಾಗೂ ಕೆಎಸ್‌ಪಿಎಸ್‌ ಸೇರಿದಂತೆ ವಿವಿಧ ನೇಮಕಾತಿಗಳಿಗೂ ಈ ತಂಡವನ್ನು ಬಳಸಲು ಯತ್ನಿಸಲಾಗಿತ್ತೆಂಬ ಬಗ್ಗೆಯೂ ಸಿಐಡಿ ಪರಿಶೀಲನೆ ನಡೆಸುತ್ತಿದೆ.

11 ಕೋಟಿ ರೂ.ಗೂ ಅಧಿಕ ಅಕ್ರಮದ ಶಂಕೆ

ಕೆಪಿಎಸ್‌ಸಿ ಅಕ್ರಮದಲ್ಲಿ ₹11 ಕೋಟಿಗೂ ಅಧಿಕ ಹಣದ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಕಣ್ಣಾಳೆ ತಂಡವೇ ಈ ಹಣಕಾಸಿನ ವ್ಯವಹಾರ ನಡೆಸಿದೆ ಎಂಬ ಅನುಮಾನ ತನಿಖಾ ಸಂಸ್ಥೆಗೆ ಎದುರಾಗಿದೆ.

ಮಂಡ್ಯ, ಮೈಸೂರು, ದಾವಣಗೆರೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಸೇರಿದಂತೆ ಸುಮಾರು 11 ಮಂದಿ ಹಣದ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಸಿಐಡಿ ಅಧಿಕಾರಿಗಳು ಈಗಾಗಲೇ ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಐಎಎಸ್ ಅಧಿಕಾರಿ ಆಭರಣ ಖರೀದಿ ವಿಚಾರವೂ ತನಿಖೆಯಲ್ಲಿ

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರು ಜುಲೈನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಜ್ಯುವೆಲರಿಯೊಂದರಲ್ಲಿ ₹26 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿ ಪತ್ನಿಗೆ ಉಡುಗೊರೆಯಾಗಿ ನೀಡಿದ್ದ ವಿಚಾರವೂ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದೀಗ ಎನ್‌ಎಂ ಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿಯ ಅನುಮಾನಾಸ್ಪದ ಹಣ ವರ್ಗಾವಣೆ ಕುರಿತು ನಡೆದ ಪರಿಶೀಲನೆಯ ವೇಳೆ, ಅದೇ ಪತ್ನಿಗೆ ಮತ್ತೊಮ್ಮೆ ಸುಮಾರು ₹30 ಲಕ್ಷ ಮೌಲ್ಯದ ಆಭರಣಗಳನ್ನು ಖರೀದಿಸಿಕೊಟ್ಟಿರುವ ಮಾಹಿತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ಹಣಕಾಸಿನ ವ್ಯವಹಾರಗಳು ಪ್ರಕರಣಕ್ಕೆ ಸಂಬಂಧಿಸಿವೆಯೇ ಎಂಬುದನ್ನು ಸಿಐಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button