ಶಿಕ್ಷಣ

ಕಲಬುರಗಿಯಲ್ಲಿ ನ. ೭ರಂದು ಬಸವ ಗುರುಕುಲ ಶಾಲೆಯ ಪ್ರಾರಂಭೋತ್ಸವ

ಸಮಗ್ರ ಶಿಕ್ಷಣದ ಮೂಲಕ ಮಕ್ಕಳನ್ನು ಜೀವನಕ್ಕೆ ಸಜ್ಜುಗೊಳಿಸುವ ಉದ್ದೇಶ: ಪ್ರೊ. ಅಮರದೀಪ್ ಪಡುಕೋಣೆ

ಕಲಬುರಗಿ, ನ. ೪: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನವೆಂಬರ್ ೭ರಂದು ಸಂಜೆ ೫ ಗಂಟೆಗೆ ಬಸವ ಗುರುಕುಲ ಶಾಲೆಯ ನೂತನ ಶೈಕ್ಷಣಿಕ ಪರಿಕಲ್ಪನೆಯ ಸಾರ್ವಜನಿಕ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಶಾಲೆಯ ನಿರ್ದೇಶಕ ಪ್ರೊ. ಅಮರದೀಪ್ ಪಡುಕೋಣೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಗುರುಕುಲ ಶಾಲೆಯು ‘ಸಂಪೂರ್ಣ ಶಿಕ್ಷಣ–ಭವಿಷ್ಯಕ್ಕಾಗಿ ಸಂಪೂರ್ಣ ಸಿದ್ಧತೆ’ ಎಂಬ ಧ್ಯೇಯದೊಂದಿಗೆ ಆರಂಭವಾಗುತ್ತಿದೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಶಿಕ್ಷಣದ ಸ್ವರೂಪವೂ ಬದಲಾಗಬೇಕಿದೆ. ಪಠ್ಯಪುಸ್ತಕದ ಜ್ಞಾನ, ಪರೀಕ್ಷೆಯ ಅಂಕಗಳು ಮತ್ತು ಪ್ರಮಾಣಪತ್ರಗಳಿಗೆ ಮಾತ್ರ ಶಿಕ್ಷಣವನ್ನು ಸೀಮಿತಗೊಳಿಸದೆ, ಮಕ್ಕಳಲ್ಲಿರುವ ಪ್ರತಿಭೆ, ಸೃಜನಶೀಲತೆ, ಸಂಶೋಧನಾ ಮನೋಭಾವ, ವೈಜ್ಞಾನಿಕ ಚಿಂತನೆ, ನೈತಿಕ ಮೌಲ್ಯಗಳು ಹಾಗೂ ಜೀವನ ಕೌಶಲಗಳನ್ನು ಬೆಳೆಸುವ ಸಮಗ್ರ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಶಾಲೆಯ ಉದ್ದೇಶವಾಗಿದೆ ಎಂದರು.

ಪ್ರಾಚೀನ ಗುರುಕುಲ ಪದ್ಧತಿಯ ಜ್ಞಾನ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಆಧುನಿಕ ವಿಜ್ಞಾನ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಸೃಜನಶೀಲತೆ ಹಾಗೂ ಹೊಸ ಆವಿಷ್ಕಾರಗಳೊಂದಿಗೆ ಸಂಯೋಜಿಸುವುದು ಶಾಲೆಯ ಪ್ರಮುಖ ಆಶಯವಾಗಿದೆ. ಮಕ್ಕಳು ಕೇವಲ ಓದುವುದು, ನೆನಪಿಟ್ಟುಕೊಳ್ಳುವುದು ಮತ್ತು ಪರೀಕ್ಷೆ ಬರೆಯುವುದಷ್ಟೇ ಶಿಕ್ಷಣದ ಗುರಿಯಲ್ಲ. ಅವರು ಮಾತನಾಡಬೇಕು, ಪ್ರಶ್ನಿಸಬೇಕು, ಸಂಶೋಧಿಸಬೇಕು, ಪ್ರಯೋಗ ಮಾಡಬೇಕು, ಚರ್ಚಿಸಬೇಕು, ಹೊಸ ಆಲೋಚನೆಗಳನ್ನು ರೂಪಿಸಬೇಕು ಹಾಗೂ ಕಲಿತ ಜ್ಞಾನವನ್ನು ನೈಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳನ್ನು ಕೇವಲ ಪರೀಕ್ಷೆಗಳಿಗೆ ಸಿದ್ಧಪಡಿಸುವುದಲ್ಲ, ಜೀವನಕ್ಕೆ ಸಿದ್ಧಪಡಿಸುವುದು ನಮ್ಮ ನಂಬಿಕೆ. ಜ್ಞಾನದಿಂದ ಆರಂಭವಾಗಿ ಅದರ ಅನ್ವಯ, ಕೌಶಲಗಳ ಅಭಿವೃದ್ಧಿ, ಸೃಜನಶೀಲತೆ, ಸಮಸ್ಯೆ ಪರಿಹಾರ ಮತ್ತು ಆವಿಷ್ಕಾರದ ಹಂತಗಳವರೆಗೆ ಕಲಿಕೆ ಸಾಗಬೇಕು ಎಂದರು.

ಬಸವ ಗುರುಕುಲ ಶಾಲೆಯು ಆರು ಪ್ರಮುಖ ಶೈಕ್ಷಣಿಕ ಸ್ತಂಭಗಳನ್ನು ಹೊಂದಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಭಾಷೆ ಸೇರಿದಂತೆ ಪಠ್ಯಕ್ರಮದ ವಿಷಯಗಳಲ್ಲಿ ಗಟ್ಟಿ ಜ್ಞಾನ ಹಾಗೂ ಪರಿಕಲ್ಪನೆಗಳ ಸ್ಪಷ್ಟತೆ ಬೆಳೆಸುವುದು; ತಂತ್ರಜ್ಞಾನ ಮತ್ತು ಆಧುನಿಕ ಸಾಧನಗಳ ಪರಿಚಯದ ಮೂಲಕ ಭವಿಷ್ಯದ ತಂತ್ರಜ್ಞಾನ ಆಧಾರಿತ ಜಗತ್ತಿಗೆ ಮಕ್ಕಳನ್ನು ಸಿದ್ಧಪಡಿಸುವುದು; ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ಹೊಸದನ್ನು ನಿರ್ಮಿಸುವ ಸಾಮರ್ಥ್ಯ ಬೆಳೆಸುವುದು; ಮಕ್ಕಳ ಕಲ್ಪನಾಶಕ್ತಿ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯಕ್ಕೆ ಪ್ರೋತ್ಸಾಹ ನೀಡುವುದು; ಮಾದರಿ ನಿರ್ಮಾಣ, ಯೋಜನೆ, ಕಲೆ, ವಿನ್ಯಾಸ ಮತ್ತು ಆವಿಷ್ಕಾರಗಳ ಮೂಲಕ ಅನುಭವಾಧಾರಿತ ಕಲಿಕೆಗೆ ಅವಕಾಶ ಕಲ್ಪಿಸುವುದು; ವೈಜ್ಞಾನಿಕ ಪ್ರಯೋಗ, ಕ್ಷೇತ್ರ ಅಧ್ಯಯನ, ಸಂಶೋಧನಾ ಚಟುವಟಿಕೆ ಹಾಗೂ ಪ್ರಕೃತಿ ವೀಕ್ಷಣೆಯ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವುದು ಇವು ಶಾಲೆಯ ಪ್ರಮುಖ ಆದ್ಯತೆಗಳಾಗಿವೆ ಎಂದು ವಿವರಿಸಿದರು.

ಮಕ್ಕಳಲ್ಲಿ ಮಾನವೀಯತೆ, ಶಿಸ್ತು, ಪ್ರಾಮಾಣಿಕತೆ, ಗೌರವ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದಕ್ಕೂ ಆದ್ಯತೆ ನೀಡಲಾಗುತ್ತದೆ. ಭಾರತೀಯ ಸಂಸ್ಕೃತಿ, ಪರಂಪರೆ, ಜ್ಞಾನ ಪದ್ಧತಿ ಮತ್ತು ಜೀವನ ಮೌಲ್ಯಗಳನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಲಾಗುವುದು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸದೃಢತೆಗೂ ಮಹತ್ವ ನೀಡಲಾಗುತ್ತದೆ. ಕ್ರೀಡೆ, ಯೋಗ, ಮೆದುಳಿನ ಚಟುವಟಿಕೆಗಳು, ಏಕಾಗ್ರತೆ, ಸ್ಮರಣಶಕ್ತಿ ಹಾಗೂ ತಂಡದೊಂದಿಗೆ ಕೆಲಸ ಮಾಡುವ ಗುಣಗಳನ್ನು ಬೆಳೆಸುವ ಮೂಲಕ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ನೆರವಾಗಲಾಗುವುದು ಎಂದರು.

ಕಲಿಕೆಯ ಹೊಸ ವಿಧಾನವು ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಬಾರದು. ಪ್ರಾಯೋಗಿಕ ಚಟುವಟಿಕೆಗಳು, ವಿಜ್ಞಾನ ಪ್ರಯೋಗಗಳು, ಸಂಶೋಧನೆ, ತಂತ್ರಜ್ಞಾನ, ಗುಂಪು ಚರ್ಚೆಗಳು, ಪ್ರಸ್ತುತಿಗಳು ಮತ್ತು ಸೃಜನಶೀಲ ಯೋಜನೆಗಳ ಮೂಲಕ ಕಲಿಯುವ ವಾತಾವರಣವನ್ನು ರೂಪಿಸಲಾಗುವುದು. ಮಕ್ಕಳು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು, ತಂಡವಾಗಿ ಕೆಲಸ ಮಾಡಲು ಹಾಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುವುದು. ಇದು ಕೇವಲ ಮತ್ತೊಂದು ಶಾಲೆಯ ಆರಂಭವಲ್ಲ; ಶಿಕ್ಷಣವನ್ನು ನೋಡುವ ಮತ್ತು ಅನುಭವಿಸುವ ವಿಧಾನದಲ್ಲಿ ಹೊಸ ಬದಲಾವಣೆ ತರುವ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಅಲ್ಲಮಪ್ರಭು ದೇಶಮುಖ, ಉಪನ್ಯಾಸಕಿ ಶ್ರೀಮತಿ ಸವಿತಾ ಬಿ. ನಾಸಿ, ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಜಯಶ್ರೀ ಮಲ್ಲಿಕಾರ್ಜುನ ಹೊರಗಿನಮಠ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ವ್ಯವಸ್ಥಾಪಕ ಬಸವರಾಜ ಕೋನಿನ್, ಜೈನ ಸಮಾಜದ ಕಾರ್ಯದರ್ಶಿ ಹಾಗೂ ಚಿನ್ನದ ವ್ಯಾಪಾರಿ ನವೀನ ಜೈನ್, ಕೈಗಾರಿಕೋದ್ಯಮಿ ಸಂಪತ್ ಸಾರಡಾ ಮತ್ತು ಮಾಹಿತಿ ತಂತ್ರಜ್ಞಾನ ಎಂಜಿನಿಯರ್ ಮಾನಸಾ ಸಾಗರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಲೆಯ ನಿರ್ದೇಶಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button