ಸಾಮಾಜಿಕ ಕಾರ್ಯ ಸಂಶೋಧನೆಯಿಂದ ಉತ್ತಮ ಆಡಳಿತ ಸಾಧ್ಯ: ಪ್ರೊ. ಬಟ್ಟು ಸತ್ಯನಾರಾಯಣ
ಸಂಶೋಧನಾ ವರದಿಗಳು ಸರ್ಕಾರದ ನೀತಿ ರೂಪಣೆ, ಸಮಾಜದ ಅಭಿವೃದ್ಧಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳಿಗೆ ಅಮೂಲ್ಯ ಮಾರ್ಗದರ್ಶಕ ಎಂದು ಅಭಿಪ್ರಾಯ.

ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳು ಮತ್ತು ಅವುಗಳಿಂದ ಸಿದ್ಧವಾಗುವ ಸಂಶೋಧನಾ ವರದಿಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸಾರ್ವಜನಿಕ ನೀತಿಗಳ ರೂಪಿಕರಣಕ್ಕೆ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಂಶೋಧನೆ, ಬರವಣಿಗೆ ಮತ್ತು ಪ್ರಕಟಣೆ’ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ತಲುಪಿಸುವುದು ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಮಾಜ ಕಾರ್ಯ ಸಂಶೋಧಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಂಶೋಧನೆಗಳು ಉತ್ತಮ ಆಡಳಿತ ವ್ಯವಸ್ಥೆಗೆ ಬಲ ತುಂಬುವ ಜೊತೆಗೆ ಜನಪರ ನೀತಿಗಳ ರೂಪಿಕರಣಕ್ಕೂ ನೆರವಾಗುತ್ತವೆ ಎಂದು ಹೇಳಿದರು.
ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಗ್ರಾಮ ಸಮೀಕ್ಷೆ, ಕ್ಷೇತ್ರ ಭೇಟಿ, ದತ್ತಾಂಶ ಸಂಗ್ರಹಣೆ, ಸಮುದಾಯದೊಂದಿಗೆ ಸಂವಾದ ಮತ್ತು ಸಮುದಾಯ ಆಧಾರಿತ ಸಂಶೋಧನೆಗಳ ಮೂಲಕ ಜನಜೀವನದ ವಾಸ್ತವಾಂಶಗಳನ್ನು ಅಧ್ಯಯನ ಮಾಡಬೇಕು. ಸಮಾಜದ ಅಗತ್ಯಗಳಿಗೆ ಸ್ಪಂದಿಸುವ, ನೈತಿಕ ಮೌಲ್ಯಗಳನ್ನು ಒಳಗೊಂಡ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗುವ ಗುಣಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವಂತೆ ಅವರು ಕರೆ ನೀಡಿದರು.
ಆಸ್ಟ್ರೇಲಿಯಾದ ಚಾರ್ಲ್ಸ್ ಸ್ಟರ್ಟ್ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರೂ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿರುವ ಪ್ರೊ. ಮನೋಹರ್ ಪವಾರ್ ಅವರು ವಿಶೇಷ ಉಪನ್ಯಾಸ ನೀಡಿ, ಸಂಶೋಧನಾ ವಿಧಾನ, ಶೈಕ್ಷಣಿಕ ಬರವಣಿಗೆ, ಪ್ರಕಟಣಾ ನೀತಿ ಹಾಗೂ ಪ್ರತಿಷ್ಠಿತ ಸಂಶೋಧನಾ ನಿಯತಕಾಲಿಕೆಗಳಲ್ಲಿ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸುವ ಮಹತ್ವವನ್ನು ವಿವರಿಸಿದರು. ಸಂಶೋಧನೆಯಲ್ಲಿ ಪ್ರಾಮಾಣಿಕತೆ ಮತ್ತು ಗುಣಮಟ್ಟ ಕಾಪಾಡಿಕೊಂಡು ಸಮಾಜಮುಖಿ ಸಂಶೋಧನೆಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜ ಹಾಗೂ ವರ್ತನಾ ವಿಜ್ಞಾನ ನಿಕಾಯದ ಡೀನ್ ಪ್ರೊ. ಪವಿತ್ರಾ ಆರ್. ಆಲೂರ್, ಪ್ರೊ. ಚೆನ್ನವೀರ ಆರ್.ಎಂ., ಡಾ. ಚಿತ್ಕಲಾ ವೆಂಕರೆಡ್ಡಿ, ಡಾ. ಎಂ. ಶಿವಮೂರ್ತಿ, ಡಾ. ಹರೀಶ್, ಡಾ. ರವೀಂದ್ರಕುಮಾರ್, ಡಾ. ಶ್ರೀನಿವಾಸ್ ಡಿ. ಸೇರಿದಂತೆ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಲಕ್ಷ್ಮಣ ಜಿ. ಸ್ವಾಗತಿಸಿದರು. ಡಾ. ಎಂ. ಶಿವಮೂರ್ತಿ ವಂದಿಸಿದರು. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಸಮಾರೋಪಗೊಂಡಿತು.



