ನಿರಂತರ 24 ಗಂಟೆಗಳ ಕನ್ನಡ ಬೋಧನೆ ನಡೆಸಿದ ಶಿಕ್ಷಕ ಸಂಗಮೇಶ್ ರೋಣದ್
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ 24 ಗಂಟೆಗಳ ನಿರಂತರ ಕನ್ನಡ ವ್ಯಾಕರಣ ಮತ್ತು ಸಾಹಿತ್ಯ ಬೋಧನೆ; ಶಿಕ್ಷಕರ ಸಾಧನೆಗೆ ವ್ಯಾಪಕ ಮೆಚ್ಚುಗೆ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಲ್ಲಿ ಕನ್ನಡ ಭಾಷೆಯ ಜ್ಞಾನವನ್ನು ವೃದ್ಧಿಸುವ ಉದ್ದೇಶದಿಂದ ನಗರದ ಶೃಂಗೇರಿ ಅಕಾಡೆಮಿಯಲ್ಲಿ ಶಿಕ್ಷಕ ಸಂಗಮೇಶ್ ರೋಣದ್ ಅವರು ನಿರಂತರ 24 ಗಂಟೆಗಳ ಕಾಲ ಕನ್ನಡ ವ್ಯಾಕರಣ ಹಾಗೂ ಕನ್ನಡ ಸಾಹಿತ್ಯ ಬೋಧನೆ ನಡೆಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಜುಲೈ 15ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾದ ವಿಶೇಷ ತರಗತಿ ಜುಲೈ 16ರಂದು ಬೆಳಿಗ್ಗೆ 8 ಗಂಟೆಯವರೆಗೆ ಯಾವುದೇ ವಿರಾಮವಿಲ್ಲದೆ ನಡೆಯಿತು. ಈ ಅವಧಿಯಲ್ಲಿ ಕಡ್ಡಾಯ ಕನ್ನಡ, ವ್ಯಾಕರಣ, ಸಾಹಿತ್ಯ, ಪ್ರಮುಖ ಲೇಖಕರು, ಕವಿಗಳು, ವ್ಯಾಕರಣ ನಿಯಮಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ವಿವಿಧ ವಿಷಯಗಳನ್ನು ಸಮಗ್ರವಾಗಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಶಿಕ್ಷಕರ ಬೋಧನಾ ಶೈಲಿ, ವಿಷಯದ ಆಳವಾದ ಅರಿವು ಹಾಗೂ ನಿರಂತರ ಪರಿಶ್ರಮವನ್ನು ಶ್ಲಾಘಿಸಿದರು. ಈ ವಿನೂತನ ಪ್ರಯತ್ನವು ಕನ್ನಡ ಭಾಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಿದೆ ಎಂದು ಅವರು ಅಭಿಪ್ರಾಯಪಟ್ಟರು.
24 ಗಂಟೆಗಳ ಕಾಲ ಯಾವುದೇ ಆಯಾಸವಿಲ್ಲದೆ ಕನ್ನಡ ಬೋಧನೆ ನಡೆಸಿದ ಸಂಗಮೇಶ್ ರೋಣದ್ ಅವರ ಬದ್ಧತೆ, ಕನ್ನಡದ ಮೇಲಿನ ಪ್ರೀತಿ ಹಾಗೂ ಶಿಕ್ಷಣ ಸೇವೆಯನ್ನು ಕಂಬಳೇಶ್ವರ ಗಚ್ಚಿನಮಠದ ಸೋಮಶೇಖರ ಶಿವಾಚಾರ್ಯರು, ಡಾ. ಮೇಟಿ ರುದ್ರೇಶ್, ಗಾಳೇಶ್ ಶೃಂಗೇರಿ, ವೀರಭದ್ರಪ್ಪ ಗುರುವಿಮಠಕಲ್, ಶಾಂತಕುಮಾರ್ ಹತ್ತಿ, ಮಲ್ಲಿಕಾರ್ಜುನ ಪೂಜಾರಿ, ರಮೇಶ್ ಬೊಮ್ಮನಹಳ್ಳಿ, ಅನೀಲ ವಡ್ಡಡಗಿ ಸೇರಿದಂತೆ ಅನೇಕ ಗಣ್ಯರು ಪ್ರಶಂಸಿಸಿದರು.
ಈ ಸಾಧನೆಯು ಕನ್ನಡ ಭಾಷೆಯ ಬೆಳವಣಿಗೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾದರಿಯ ಪ್ರಯತ್ನವೆಂದು ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಕ್ರಮದ ಛಾಯಾಚಿತ್ರಗಳು, ವಿಡಿಯೊಗಳು ಹಾಗೂ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಕ್ಷಕ ಸಂಗಮೇಶ್ ರೋಣದ್ ಅವರನ್ನು 9901097012 ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.



