ಅಕ್ರಮ ಮರಳು ಸಂಗ್ರಹಕ್ಕೆ ಅವಕಾಶ ನೀಡಿದರೆ ಜಮೀನು ಸರ್ಕಾರದ ವಶಕ್ಕೆ: ತಹಶೀಲ್ದಾರ್ ಹಿರೇಮಠ ಎಚ್ಚರಿಕೆ
ಇಂಗಳಗಿ ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹ ಪ್ರಕರಣ; ರೈತರಿಗೆ ಕಠಿಣ ಎಚ್ಚರಿಕೆ ನೀಡಿದ ತಹಶೀಲ್ದಾರ್

ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹ ಮತ್ತು ಸಾಗಾಣಿಕೆಗೆ ರೈತರ ಜಮೀನನ್ನು ಬಳಸಲು ಅವಕಾಶ ನೀಡಿದರೆ, ಅಂತಹ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಎಚ್ಚರಿಕೆ ನೀಡಿದ್ದಾರೆ.
ಇಂಗಳಗಿ ಗ್ರಾಮದ ಸರ್ವೇ ನಂ. 9/2 ಹಾಗೂ 10ರ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಹಾಗೂ ಸಾಗಾಣಿಕೆ ನಡೆಯುತ್ತಿರುವ ಕುರಿತು ಬಂದ ದೂರುಗಳು ಮತ್ತು ಕಂದಾಯ ಇಲಾಖೆಯ ಪರಿಶೀಲನಾ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಗಿನಾ ನದಿಯಿಂದ ಅಕ್ರಮವಾಗಿ ಮರಳು ತೆಗೆಯುವ ಮೂಲಕ ಖಾಸಗಿ ಜಮೀನುಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದ ರಾಜಸ್ವ ನಷ್ಟ ಉಂಟಾಗುತ್ತಿದೆ. ಜೊತೆಗೆ ಪರಿಸರ, ಅಂತರ್ಜಲ ಮಟ್ಟ ಹಾಗೂ ಗ್ರಾಮೀಣ ರಸ್ತೆಗಳಿಗೂ ಗಂಭೀರ ಹಾನಿಯಾಗುತ್ತಿದೆ ಎಂದು ಅವರು ವಿವರಿಸಿದರು.
ಅಕ್ರಮ ಮರಳು ಸಾಗಾಣಿಕೆಗೆ ಅನುಕೂಲವಾಗುವಂತೆ ಸರ್ವೇ ನಂ. 10ರ ಜಮೀನಿನಲ್ಲಿ ಅನಧಿಕೃತ ರಸ್ತೆ ನಿರ್ಮಿಸಿರುವುದೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸಂಬಂಧಿತ ನಿಯಮಗಳಡಿ ಸರ್ವೇ ನಂ. 9/2 ಮತ್ತು 10ರ ಜಮೀನುಗಳ ದಾಖಲೆಗಳಲ್ಲಿ ಸರ್ಕಾರದ ಹಕ್ಕು ದಾಖಲಿಸುವಂತೆ ಆದೇಶಿಸಲಾಗಿದೆ.
ಇನ್ನು ಮುಂದೆ ಯಾವುದೇ ರೈತರು ತಮ್ಮ ಜಮೀನಿನಲ್ಲಿ ಅಕ್ರಮ ಮರಳು ಸಂಗ್ರಹ ಅಥವಾ ಸಾಗಾಣಿಕೆಗೆ ಅವಕಾಶ ನೀಡಿದರೆ, ಪರಿಶೀಲನೆಯ ಬಳಿಕ ಅವರ ಜಮೀನಿನ ದಾಖಲೆಗಳಲ್ಲಿಯೂ ಸರ್ಕಾರದ ಹೆಸರನ್ನು ದಾಖಲಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಈಗಾಗಲೇ ಇಂಗಳಗಿ ಗ್ರಾಮದ ಕೆಲವು ಜಮೀನುಗಳ ಪಹಣಿಯಲ್ಲಿ ಸರ್ಕಾರದ ಹೆಸರನ್ನು ದಾಖಲಿಸಲಾಗಿದೆ. ಒಮ್ಮೆ ಪಹಣಿಯಲ್ಲಿ ಸರ್ಕಾರದ ಹೆಸರು ದಾಖಲಾಗಿದರೆ, ಆ ಜಮೀನಿಗೆ ಸಂಬಂಧಿಸಿದ ಸಾಲ, ಅನುದಾನ ಸೇರಿದಂತೆ ಯಾವುದೇ ಸರ್ಕಾರಿ ಅಥವಾ ಬ್ಯಾಂಕ್ ಸೌಲಭ್ಯಗಳು ದೊರೆಯುವುದಿಲ್ಲ. ಆದ್ದರಿಂದ ಅಕ್ರಮ ಮರಳು ಚಟುವಟಿಕೆಗಳಿಗೆ ಯಾವುದೇ ರೀತಿಯ ಸಹಕಾರ ನೀಡದಂತೆ ರೈತರಿಗೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಮನವಿ ಮಾಡಿದ್ದಾರೆ.



