ಬೆಳೆ ವಿಮೆ, ಬೆಳೆ ಪರಿಹಾರದಲ್ಲಿ ತಾರತಮ್ಯ ಆರೋಪ: ಕಲ್ಯಾಣ ಕರ್ನಾಟಕದಲ್ಲಿ ಹೋರಾಟದ ಎಚ್ಚರಿಕೆ
ಒಂದು ವಾರದಲ್ಲಿ ಎಲ್ಲಾ ರೈತರಿಗೆ ಸಮಾನವಾಗಿ ವಿಮೆ ಮತ್ತು ಪರಿಹಾರ ವಿತರಿಸದಿದ್ದರೆ ಜಿಲ್ಲಾವ್ಯಾಪಿ ಪ್ರತಿಭಟನೆ ನಡೆಸುವುದಾಗಿ ನವ ಕರ್ನಾಟಕ ರೈತ ಸಂಘ ಎಚ್ಚರಿಕೆ

ಕಲಬುರಗಿ, ಆ.6: ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ನವ ಕರ್ನಾಟಕ ರೈತ ಸಂಘ, ಈ ಅನ್ಯಾಯವನ್ನು ತಕ್ಷಣ ಸರಿಪಡಿಸದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಯಾನಂದ ಪಾಟೀಲ, 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ 3,00,952 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, ಸರ್ಕಾರದಿಂದ 585.72 ಕೋಟಿ ರೂ. ಪರಿಹಾರ ಮಂಜೂರಾಗಿದೆ. ಅದರಂತೆ 2,87,696 ರೈತರಿಗೆ 243.52 ಕೋಟಿ ರೂ. ಮೊತ್ತದ ಮೊದಲ ಕಂತು ಬಿಡುಗಡೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ರೈತರಿಗೆ ಇನ್ನೂ ಸಮರ್ಪಕವಾಗಿ ಪರಿಹಾರ ತಲುಪಿಲ್ಲ ಎಂದು ಆರೋಪಿಸಿದರು.
ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕೇವಲ ಶೇ.10, 13, 15ರಷ್ಟು ರೈತರಿಗೆ ಮಾತ್ರ ವಿಮೆ ಹಾಗೂ ಪರಿಹಾರ ದೊರೆತಿದ್ದು, ಇನ್ನೂ ಕೆಲವೆಡೆ ಶೇ.60ರಿಂದ 70ರಷ್ಟು ಮಾತ್ರ ವಿತರಣೆ ನಡೆದಿದೆ. ಇದರಿಂದ ರೈತರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದು ಹೇಳಿದರು.
ಈಗಾಗಲೇ ಬರದಂತಹ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುವುದು ಅನ್ಯಾಯವಾಗಿದೆ ಎಂದು ದೂರಿದರು.
ಜೇವರ್ಗಿ, ಕಲಬುರಗಿ, ಆಳಂದ, ಅಫಜಲಪುರ ಹಾಗೂ ಕಮಲಾಪುರ ತಾಲೂಕುಗಳ ಹಲವಾರು ಗ್ರಾಮ ಪಂಚಾಯಿತಿಗಳ ರೈತರಿಗೆ ಇನ್ನೂ ಸಂಪೂರ್ಣ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರ ತಕ್ಷಣ ಡ್ರೋನ್ ಸಮೀಕ್ಷೆ ಸೇರಿದಂತೆ ಎಲ್ಲ ದಾಖಲೆಗಳನ್ನು ಮರುಪರಿಶೀಲಿಸಿ ನಿಜವಾದ ಫಲಾನುಭವಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಒಂದು ವಾರದೊಳಗೆ ಎಲ್ಲಾ ಅರ್ಹ ರೈತರಿಗೆ ಸಮಾನವಾಗಿ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ವಿತರಣೆ ಮಾಡದಿದ್ದರೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಜೊತೆಗೆ ಗ್ರಾಮ ಮಟ್ಟದಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗೇಂದ್ರಪ್ಪ ಆರ್. ದಂಡೋತ್ಕರ್, ಶಿವಶರಣಪ್ಪ ಮಹೇಂದ್ರಗಿ, ಶಿವಾನಂದ ಮಠಪತಿ, ಭಗವಂತರಾವ ಪಾಟೀಲ, ಗುಂಡೇರಾವ ಧೂಳಗೊಂಡ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.



